ಮೆಕೆನ್ಜಿ, ಅಲೆಕ್ಸಾಂಡರ್
1764-1820. ಕೆನಡದ ಒಬ್ಬ ಅನ್ವೇಷಣಕಾರ. ಕೆನಡದ ಅತ್ಯಂತ ಉತ್ತರದಲ್ಲಿ ಹರಿಯುವ ಮತ್ತು ಈತನ ಹೆಸರಿನಿಂದಲೇ ಮುಂದೆ ಪ್ರಸಿದ್ಧವಾದ ಮೆಕೆನ್ಜಿ ನದಿಯನ್ನು ಅನ್ವೇಷಿಸಿದ ಮತ್ತು ಉತ್ತರ ಅಮೆರಿಕದ ಭೂಖಂಡದ ಉತ್ತರ ಭಾಗವನ್ನು ಹಾದು ಪೆಸಿಫಿಕ್ ಸಾಗರವನ್ನು ಮುಟ್ಟಿದ ಪ್ರಥಮ ಶ್ವೇತವರ್ಣೀಯ. ಸ್ಕಾಟ್ಲೆಂಡಿನ ಸ್ಟೋರ್ನೊವೇ ಎಂಬಲ್ಲಿ 1764ರಲ್ಲಿ ಜನನ. 1778ರಲ್ಲಿ ಕೆನಡಕ್ಕೆ ಬಂದು ನೆಲಸಿದ. ತುಪ್ಪಳ ಮಾರಾಟದಿಂದ ಹಣಸಂಪಾದಿಸಿದ. ಇವನಿಗೆ ಮೊದಲಿನಿಂದಲೂ ಅಜ್ಞಾತಸ್ಥಳಗಳ ಶೋಧನೆ ನಡೆಸುವುದರಲ್ಲೂ ನದಿಗಳನ್ನು ಸಂದರ್ಶಿಸುವುದರಲ್ಲೂ ಹೆಚ್ಚು ಆಸಕ್ತಿ. 1789ರಲ್ಲಿ ಸ್ಲೇವ್ ಸರೋವರದ ಪಶ್ವಿಮ ತುದಿಯಿಂದ ಆರ್ಕ್‍ಟಿಕ್ ಸಾಗರದೆಡೆಗೆ ಇರುವ ಮಹಾನದಿಯ ಶೋಧನೆ ನಡೆಸಿದ. ಆ ನದಿಗೆ ಈತನ ಹೆಸರನ್ನೇ ಇಡಲಾಯಿತು. 1793ರಲ್ಲಿ ಪಶ್ಚಿಮಸಾಗರ ತೀರದೆಡೆಗೆ ಮತ್ತೊಂದು ಸಾಹಸ ಕೈಗೊಂಡ. ರಾಕೀ ಪರ್ವತಸ್ತೋಮಗಳನ್ನು ದಾಟಿ ಪೆಸಿಫಿಕ್ ಸಾಗರತೀರವನ್ನು ತಲುಪಿದ. ತನ್ನ ಅನೇಕ ಸಾಹಸಕೃತ್ಯಗಳಿಂದ ಜನತೆಗೆ ಭೌಗೋಳಿಕ ಪರಿಜ್ಞಾನವನ್ನೊದಗಿಸಿದ ಮೆಕೆನ್ಜಿ 1801ರಲ್ಲಿ ಬ್ರಿಟನ್ನಿಗೆ ಮರಳಿದಾಗ ವೈಭವದ ಸ್ವಾಗತ ನೀಡಲಾಯಿತು. 1802ರಲ್ಲಿ ಸರ್ ಪದವಿ ಇತ್ತು ಗೌರವಿಸಲಾಯಿತು. ತಾನು ಕೈಗೊಂಡ ಸಂಶೋಧನಾಯಾತ್ರೆಗಳನ್ನು ಕುರಿತು ಈತ ಪುಸ್ತಕ ಪ್ರಕಟಿಸಿದ್ದಾನೆ. ಸ್ಕಾಟ್ಲೆಂಡಿನಲ್ಲಿ ತನ್ನ ಕೊನೆಯ ದಿವಸಗಳನ್ನು ಕಳೆದ ಈತ 1820ರಲ್ಲಿ ನಿಧನಹೊಂದಿದ.
(ಸಿ.ಕೆ.ವೈ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ